Next Projects

ವಿಕಾಸ ಟ್ರಸ್ಟ್ ಮುಂದಿನ ಯೋಜನೆಗಳು

1. ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 2ನೇ ಹಂತ:
ಕಾಸರಗೋಡು ಮತ್ತು ಕನ್ನಡ ಭಾಷೆಗೆ ಸಂಬಂಧಪಟ್ಟ ವ್ಯಕ್ತಿಗಳ, ಸಂಘ-ಸಂಸ್ಥೆಗಳ, ಪ್ರೇಕ್ಷಣೀಯ ಸ್ಥಳಗಳ, ವಿಶೇಷತೆಗಳ ಕುರಿತು ಮಾಹಿತಿ ನೀಡುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ಎಂಬ 75 ದಿನಗಳ ಅಭಿಯಾನವನ್ನು ವಿಕಾಸ ಟ್ರಸ್ಟ್ (ರಿ.), 1 ನವೆಂಬರ್ 2021ರಿಂದ 14 ಜನವರಿ 2022ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ್ದು, ಸರ್ವರ ಮನ್ನಣೆಗೆ ಪಾತ್ರವಾಗಿದ್ದು ತಮಗೆಲ್ಲ ಗೊತ್ತಿರುವ ವಿಷಯ. ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡು ಜಿಲ್ಲೆ ಪ್ರತಿಭಾವಂತರ, ಸಾಧಕರ ನಾಡಾಗಿದ್ದು, ವಿಶೇಷತೆಗಳ ಕಣಜ ಎನ್ನಬಹುದು. ಕಾಸರಗೋಡಿನ ಇನ್ನಷ್ಟು ವಿಶೇಷತೆಗಳ ಕುರಿತು ಬೆಳಕು ಚೆಲ್ಲಬೇಕು, ವಿಶ್ವದ ಗಮನ ಸೆಳೆಯಬೇಕು ಎಂಬುದು ಎಲ್ಲರ ಒತ್ತಾಸೆ. ಹಾಗಾಗಿ 2ನೇ ಹಂತದ 75 ದಿನಗಳ ಅಭಿಯಾನವನ್ನು 28 ಸೆಪ್ಟೆಂಬರ್ 2024ರಂದು ಆರಂಭಿಸಿದ್ದು 11 ಡಿಸೆಂಬರ್ 2024ರವರೆಗೆ ನಡೆಯಲಿದೆ.

ದಿನಾಂಕ 28-9-2024ರಂದು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢ ಶಾಲೆ, ನೀರ್ಚಾಲು ಇಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ದ್ಯಾವಯ್ಯ ಐಪಿಎಸ್, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳಾದ ರೆ.ಫಾ. ಸ್ಟೇನಿ ಪಿರೇರಾ, ಪದ್ಮಶ್ರೀ ಪುರಸ್ಕೃತರಾದ ಶ್ರೀ ಸತ್ಯನಾರಾಯಣ ಬೆಳೇರಿ, ನೀರ್ಚಾಲು ಶಾಲೆಯ ವ್ಯವಸ್ಥಾಪಕರಾದ ಶ್ರೀ ಜಯದೇವ ಖಂಡಿಗೆ, ವಿಕಾಸ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರವಿನಾರಾಯಣ ಗುಣಾಜೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ನೂರಾರು ಪ್ರಮುಖರು ಭಾಗವಹಿಸಿದ್ದರು.

20, 21, 22 ಡಿಸೆಂಬರ್ 2024ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಲ್ಲಿ ನಾವು ಬಿಡುಗಡೆಗೊಳಿಸಿದ ಒಟ್ಟು 150 ಮಾಹಿತಿ ಪತ್ರಗಳನ್ನು ವಿಕಾಸ ಟ್ರಸ್ಟ್ ಪ್ರದರ್ಶನ ಮಳಿಗೆಯಲ್ಲಿ ಪ್ರದರ್ಶಿಸಿ, ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಕನ್ನಡಿಗರಿಗೆ ಕಾಸರಗೋಡು ಮತ್ತು ಕನ್ನಡಕ್ಕೆ ಸಂಬಂಧಿಸಿದ ಮಾಹಿತಿ ನೀಡಬೇಕು / ಅರಿವು ಮೂಡಿಸಬೇಕು / ಪ್ರಚಾರ ಮಾಡಬೇಕು ಎಂಬ ಆಲೋಚನೆ ಇದೆ.

ನಾವು ಇದುವರೆಗೆ ಬಿಡುಗಡೆಗೊಳಿಸಿದ ಎಲ್ಲಾ ಮಾಹಿತಿ ಪತ್ರಗಳನ್ನು ಇಲ್ಲಿ ವೀಕ್ಷಿಸಬಹುದು ಮತ್ತು ಹೆಸರುಗಳನ್ನು ಇಲ್ಲಿ ವೀಕ್ಷಿಸಬಹುದು.

ಯೋಜನೆಯ ಅಂದಾಜು ವೆಚ್ಚ: ರೂ 3 ಲಕ್ಷ

ಅದಲ್ಲದೇ, ಈ ಎರಡನೇ ಭಾಗದ ಅಭಿಯಾನದ ನಂತರ ಒಟ್ಟು 150 ವಿಶೇಷತೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡ ಸಮಗ್ರ ಪುಸ್ತಕ ಪ್ರಕಟಿಸಿ ಕಾಸರಗೋಡಿನ ಮನೆ ಮನೆಗೂ ಮಾರಾಟ ಮಾಡುವ, ಆ ಮೂಲಕ ಕಾಸರಗೋಡು ಜಿಲ್ಲೆಯ ನಿವಾಸಿಗಳು ಹಾಗೂ ಜಿಲ್ಲೆಯ ಜತೆ ಸಂಬಂಧವಿರುವ ಎಲ್ಲರೂ ಈ ಪುಸ್ತಕದ ಹಲವು ಪ್ರತಿಗಳನ್ನು ಖರೀದಿಸಿ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವುದಲ್ಲದೇ, ತಮ್ಮ ಬಂಧು-ಮಿತ್ರರಿಗೆ ಉಡುಗರೆಯಾಗಿ ಕೊಟ್ಟು ನಮ್ಮ ಜಿಲ್ಲೆಯ ವಿಶೇಷತೆಗಳನ್ನು, ಅಭಿಮಾನವನ್ನು ಹೆಚ್ಚಿಸುವಂತೆ ಆಗಬೇಕು ಎಂಬುದು ನಮ್ಮ ಮಹದಾಸೆ.

2. ಕಾಸರಗೋಡು ಕನ್ನಡ ಸಾಹಿತ್ಯ ವಿಕಾಸ ಯೋಜನೆ:
ಕೇರಳ ರಾಜ್ಯದ 14 ಜಿಲ್ಲೆಗಳ ಪೈಕಿ ವಿಸ್ತೀರ್ಣದಲ್ಲಿ 2ನೇ ಸಣ್ಣ ಮತ್ತು ಜನಸಂಖ್ಯೆಯಲ್ಲಿ 4ನೇ ಸಣ್ಣ ಜಿಲ್ಲೆಯಾದ ಕಾಸರಗೋಡು ಮೂಲತಃ ಸಂಪೂರ್ಣ ಕನ್ನಡ ಪ್ರದೇಶವಾಗಿತ್ತು. ಮಲಯಾಳಂ ಮಾಧ್ಯಮದಲ್ಲೇ ಕಲಿಕೆಗೆ ಕೇರಳ ಸರ್ಕಾರದ ಅತಿಯಾದ ಒತ್ತಾಸೆ, ಸಾಮಾಜಿಕ ಬದಲಾವಣೆಗಳ ಕಾರಣದಿಂದ ಪ್ರಸ್ತುತ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳಲ್ಲಿ ಮಾತ್ರ ಕನ್ನಡಿಗರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಗಡಿನಾಡ ಕಿಡಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ಎಂ. ವ್ಯಾಸ, ಕೆ.ವಿ. ತಿರುಮಲೇಶ್ ಸೇರಿದಂತೆ ಕನ್ನಡ ಸಾಹಿತ್ಯ ಲೋಕದ ಹಲವಾರು ದಿಗ್ಗಜರ ಬೀಡು ನಮ್ಮ ಕಾಸರಗೋಡು.

ಜಿಲ್ಲೆಯಲ್ಲಿ ಕನಿಷ್ಠ ಒಂದು ಪುಸ್ತಕ ರಚಿಸಿದ ಮತ್ತು ಪ್ರಕಟಿಸಿದ 800ಕ್ಕೂ ಹೆಚ್ಚಿನ ಲೇಖಕರಿದ್ದು, ಒಟ್ಟಾರೆಯಾಗಿ 5,000ಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಾಶನಗೊಂಡಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಕಾಸರಗೋಡು ಕನ್ನಡಿಗರು ಬಹುಮುಖ್ಯ ಕೊಡುಗೆ ನೀಡಿದ್ದಾರೆ. ಈ ಎಲ್ಲಾ ಕನ್ನಡ ಪುಸ್ತಕಗಳ ಸಮಗ್ರ ಮಾಹಿತಿಯನ್ನು ನಮ್ಮ ವಿಕಾಸ ಟ್ರಸ್ಟ್ ಜಾಲತಾಣದಲ್ಲಿ ಅಳವಡಿಸಿ, ಸಕಲರಿಗೂ ಕಾಸರಗೋಡು ಕನ್ನಡ ಸಾಹಿತ್ಯದ ವಿಶ್ವರೂಪ ದರ್ಶನವನ್ನು ಮಾಡಿಸುವ ಯೋಜನೆಯೇ ಕಾಸರಗೋಡು ಕನ್ನಡ ಸಾಹಿತ್ಯ ವಿಕಾಸ ಯೋಜನೆ.

ನಮ್ಮ ತಂಡವು ಕಾಸರಗೋಡಿನ ಹಳೆ ತಲೆಮಾರಿನ ಲೇಖಕರ ಮನೆಗಳಿಗೆ ತೆರಳಿ ಅವರು ಪ್ರಕಟಿಸಿದ ಪುಸ್ತಕಗಳ ಮಾಹಿತಿಗಳನ್ನು ಸಂಗ್ರಹಿಸಲಿದೆ. ಕಾಸರಗೋಡಿನಲ್ಲಿ ಹುಟ್ಟಿ ಹೊರನಾಡಿನಲ್ಲಿ ಬೆಳೆದವರು ಹಾಗೂ ಹೊರನಾಡುಗಳಲ್ಲಿ ಹುಟ್ಟಿ ಕಾಸರಗೋಡಿನಲ್ಲಿ ಬೆಳೆದ ಎಲ್ಲಾ ಲೇಖಕರ ಸಮಗ್ರ ಸಾಹಿತ್ಯ ಕೃಷಿಯ ವಿವರಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಈ ಜಾಲತಾಣದಲ್ಲಿ ಪುಸ್ತಕದ ಮುಖಪುಟ, ಲೇಖಕರ ಹೆಸರು, ಪ್ರಕಾಶಕರ ಹೆಸರು, ಒಟ್ಟು ಪುಟಗಳ ಸಂಖ್ಯೆ, ಪ್ರಥಮ ಮುದ್ರಣ ವರ್ಷ, ಒಟ್ಟು ಮುದ್ರಣಗಳ ಸಂಖ್ಯೆ, ಪುಟಗಳ ಸಂಖ್ಯೆ, ಪುಸ್ತಕದ ಗಾತ್ರ, ಪುಸ್ತಕದ ಕುರಿತಾದ ಸಂಕ್ಷಿಪ್ತ ಮಾಹಿತಿ ಮುಂತಾದ ವಿವರಗಳಲ್ಲದೇ, ಓದುಗರು ವಿಮರ್ಶೆ ದಾಖಲಿಸಲು ಅವಕಾಶ, ಪುಸ್ತಕದ ಪ್ರತಿಗಳು ಮಾರಾಟಕ್ಕೆ ಲಭ್ಯವಿದ್ದರೆ ಅವುಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಅವಕಾಶವೂ ಇರಲಿದೆ. ಆಯಾಯ ಲೇಖಕರ ಹೆಸರು ಮತ್ತು ಪ್ರಕಾಶಕರ ಹೆಸರು ಕ್ಲಿಕ್ಕಿಸಿದರೆ ಆ ಎಲ್ಲಾ ಲೇಖಕರು ಬರೆದ ಎಲ್ಲ ಪುಸ್ತಕಗಳ ಮಾಹಿತಿ ಮತ್ತು ಪ್ರಕಾಶಕರು ಪ್ರಕಟಿಸಿದ ಎಲ್ಲ ಪುಸ್ತಕಗಳ ಮಾಹಿತಿ ಅಲ್ಲೇ ಒಟ್ಟಿಗೆ ದೊರಕುವುದು ಈ ಜಾಲತಾಣದ ವಿಶೇಷತೆ.

ಯೋಜನೆಯ ಅಂದಾಜು ವೆಚ್ಚ: ರೂ 5 ಲಕ್ಷ

3. ಕನ್ನಡ ಭಾಷೆಯಲ್ಲಿ ತಯಾರಿಸಿದ ಕಾಸರಗೋಡು ಜಿಲ್ಲೆಯ ನಕ್ಷೆ ವಿತರಣೆ:

ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಛರಿಸಬೇಕಿದ್ದರೆ ಅವು ನಮ್ಮ ಮಾತೃಭಾಷೆಯಲ್ಲಿ ಬರೆದಿರಬೇಕು.

ಈ ದೃಷ್ಟಿಯಿಂದ ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳ, ಬ್ಲಾಕ್ ಪಂಚಾಯತುಗಳ, ವಿಧಾನಸಭಾ ಕ್ಷೇತ್ರಗಳ, ತಾಲೂಕುಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ದಾಖಲಿಸಿರುವ, ವಿಕಾಸ ಟ್ರಸ್ಟ್ (ರಿ.) ತಯಾರಿಸಿದ ಕಾಸರಗೋಡು ಜಿಲ್ಲಾ ನಕ್ಷೆಯನ್ನು ಇಲ್ಲಿ Kasaragod District Map in Kannada ವೀಕ್ಷಿಸಬಹುದು.

ಕಾಸರಗೋಡು ಜಿಲ್ಲೆಯ ಎಲ್ಲಾ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳಿಗೆ, ಪ್ರಮುಖ ರಾಜಕೀಯ ಪಕ್ಷಗಳ ಜಿಲ್ಲಾ ಕಛೇರಿಗಳು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಛೇರಿ, ಪ್ರಮುಖ ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು ಸೇರಿದಂತೆ ಪ್ರಮುಖ ಸಂಘ-ಸಂಸ್ಥೆಗಳ ಕಛೇರಿಗಳಿಗೆ, ಉತ್ತಮ ಗುಣಮಟ್ಟದ ಬೃಹತ್ ಗಾತ್ರದ ಗೋಡೆಯಲ್ಲಿ ತೂಗು ಹಾಕುವಂತಹ ಕಾಸರಗೋಡು ಜಿಲ್ಲೆಯ ನಕ್ಷೆಗಳನ್ನು ತಲಾ ಎರಡು ಪ್ರತಿಗಳಂತೆ (ಒಟ್ಟು: 700 ಪ್ರತಿಗಳು) ವಿತರಿಸುವ ಉದ್ದೇಶವಿದೆ.

ಯೋಜನೆಯ ಅಂದಾಜು ವೆಚ್ಚ: ರೂ 3 ಲಕ್ಷ

4. ಬೆಂಗಳೂರಿನಲ್ಲಿ ಕಾಸರಗೋಡು ಹಬ್ಬ ಆಯೋಜನೆ:

ನಿಮಗೆಲ್ಲ ತಿಳಿದಿರುವಂತೆ ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡು, 1956ರ ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ಕೇರಳಕ್ಕೆ ಸೇರಿಸಲ್ಪಟ್ಟದ್ದು ಒಂದು ಮಹಾದುರಂತವೇ ಸರಿ. ಕೇರಳದ ಉತ್ತರದ ತುದಿಯಲ್ಲಿರುವ ಈ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು ವೈದ್ಯಕೀಯ, ಉನ್ನತ ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿ ಹಿಂದುಳಿದಿದೆ. ಕಾಸರಗೋಡು ಜನರಿಗೆ ಕೇರಳದ ರಾಜಧಾನಿ ತಿರುವನಂತಪುರ 650 ಕಿ.ಮೀ. ಅಂತರದಲ್ಲಿದ್ದರೆ, ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ 350 ಕಿ.ಮೀ. ಅಂತರದಲ್ಲಿದೆ. ಕಾಸರಗೋಡಿನ ಜನರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಕೌಟುಂಬಿಕವಾಗಿ, ವ್ಯಾವಹಾರಿಕ, ವೈದ್ಯಕೀಯ, ಉನ್ನತ ಶಿಕ್ಷಣಕ್ಕಾಗಿ ಪಕ್ಕದ ಜಿಲ್ಲೆಯಾದ ದಕ್ಷಿಣ ಕನ್ನಡವನ್ನು ಆಶ್ರಯಿಸಿದ್ದಾರೆ. ಉದ್ಯೋಗಕ್ಕಾಗಿ ಕಾಸರಗೋಡು ಜನರ ಮೊದಲ ಆಯ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರ. ಸಾವಿರಾರು ಕಾಸರಗೋಡು ಕನ್ನಡಿಗರ ಕರ್ಮಭೂಮಿ ನಮ್ಮ ಬೆಂಗಳೂರು.

ಬೆಂಗಳೂರು ಸೇರಿದಂತೆ ಕಾಸರಗೋಡು ಜಿಲ್ಲೆಯ ಹೊರಭಾಗದಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಜನರನ್ನು ಸಂಘಟಿಸುವ ಉದ್ದೇಶದಿಂದ 2021ರಲ್ಲಿ ಬೆಂಗಳೂರಿನಲ್ಲೇ ಸ್ಥಾಪಿತವಾದ ಸಂಘಟನೆ ವಿಕಾಸ ಟ್ರಸ್ಟ್ (ರಿ.). ಕಾಸರಗೋಡು ಮತ್ತು ಕನ್ನಡ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯನ್ನು ಧ್ಯೇಯವಾಗಿಟ್ಟುಕೊಂಡಿರುವ ನಮ್ಮ ಸಂಘಟನೆಯ ಬಹು ನಿರೀಕ್ಷೆಯ ಉತ್ಸವ ಕಾಸರಗೋಡು ಹಬ್ಬ.

ದಿನಪೂರ್ತಿ ನಡೆಯುವ ಈ ಕಾರ್ಯಕ್ರಮವು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲದೇ, ಕಾಸರಗೋಡು ಕನ್ನಡಿಗರ ಸಮಸ್ಯೆಗಳು – ಸವಾಲುಗಳು – ಪರಿಹಾರಗಳು ಕುರಿತ ದುಂಡುಮೇಜಿನ ಸಭೆ, ಕಾಸರಗೋಡಿನ ಸಾಧಕರನ್ನು ಕಾಸರಗೋಡು ವಿಕಾಸ ಭೂಷಣ ಪ್ರಶಸ್ತಿ ಮೂಲಕ ಗೌರವಿಸುವ ಮತ್ತು ಸಂಗೀತ ಸಂಜೆ ಮುಂತಾದ ಕಾರ್ಯಕ್ರಮಗಳನ್ನು ಒಳಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಬೆಂಗಳೂರಿನ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಕಾಸರಗೋಡಿನ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಯೋಜನೆಯ ಅಂದಾಜು ವೆಚ್ಚ: ರೂ 25 ಲಕ್ಷ

ಕಾಸರಗೋಡಿನ ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ನಾವು ಹಮ್ಮಿಕೊಳ್ಳಲಿರುವ ಹಲವಾರು ದೂರದೃಷ್ಟಿಯ ಯೋಜನೆಗಳು ಸಾಕಾರಗೊಳ್ಳಲು ಸಹೃದಯರಾದ ತಮ್ಮೆಲ್ಲರ ಉದಾರ ಮನಸ್ಸಿನ ದೇಣಿಗೆಯ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಇದುವರೆಗಿನ ಕಾರ್ಯಚಟುವಟಿಕೆಗಳ ಕುರಿತಾದ ಸಂಪೂರ್ಣ ಮಾಹಿತಿ www.vikasatrust.org ಜಾಲತಾಣದಲ್ಲಿ ಲಭ್ಯವಿದೆ. ತಾವೆಲ್ಲರೂ ಈ ಕೆಳಗೆ ನೀಡಿದ ನಮ್ಮ ಬ್ಯಾಂಕ್ ಖಾತೆಗೆ ತಮ್ಮ ಉದಾರ ದೇಣಿಗೆಯನ್ನು ನೀಡಿ, ನಮಗೆ ಬೆನ್ನೆಲುಬಾಗಿ ಸಹಕರಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.

Account Holder Name: Vikasa Trust (R.)
Current Account No: 9220 2005 4653 141
Bank: Axis Bank
Branch: Nagdevanahalli, Bengaluru
IFS Code: UTIB0003770

ದೇಣಿಗೆ ರಶೀದಿ ಪಡೆಯಲು, ತಾವು ನೀಡಿದ ದೇಣಿಗೆಯ ವಿವರಗಳನ್ನು ನಮ್ಮ ಮೊಬೈಲ್ ಸಂಖ್ಯೆ +91 97 43 11 77 33 ಗೆ ಕಳುಹಿಸಬೇಕಾಗಿ ವಿನಂತಿ.

✍️ಅಧ್ಯಕ್ಷರು ಮತ್ತು ಸದಸ್ಯರು
ವಿಕಾಸ ಟ್ರಸ್ಟ್ (ರಿ.)
www.vikasatrust.org
97 43 11 77 33 | 99 00 23 55 55
7 ಅಕ್ಟೋಬರ್ 2024

Loading

Leave a Reply

Your email address will not be published. Required fields are marked *