ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ – ಒಂದು ಸ್ವಗತ

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ – ಒಂದು ಸ್ವಗತ

1956ರ ಭಾಷಾವಾರು ಪ್ರಾಂತ ಪುನರ್ವಿಂಗಡಣೆಯಿಂದಾಗಿ ಅಚ್ಚಗನ್ನಡ ಪ್ರದೇಶವಾಗಿದ್ದ ಕಾಸರಗೋಡು, ಕೇರಳಕ್ಕೆ ಸೇರಿಸಲ್ಪಟ್ಟ ವಿಷಯ ಸರ್ವವೇದ್ಯ. ನಂತರದ ವರ್ಷಗಳಲ್ಲಿ ನಿರಂತರ ತುಳಿತಕ್ಕೊಳಗಾದ ಕನ್ನಡ ಭಾಷೆ-ಸಂಸ್ಕೃತಿ ಮತ್ತು ಕನ್ನಡಿಗರಲ್ಲಿ ಆತ್ಮಾಭಿಮಾನ ವರ್ಧಿಸಲು ಹಾಗೂ ಕಾಸರಗೋಡು – ಕನ್ನಡ ಭಾಷೆಯ ಆಳವಾದ ಸಂಬಂಧವನ್ನು ಕಾಸರಗೋಡಿನ ಯುವ ತಲೆಮಾರು ಮತ್ತು ವಿಶ್ವದೆಲ್ಲೆಡೆಯ ಕನ್ನಡಿಗರ ಗಮನಕ್ಕೆ ತರುವ ಉದ್ದೇಶದಿಂದ ವಿಕಾಸ ಟ್ರಸ್ಟ್ (ರಿ.), ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ನಡೆಸಲು ನಿರ್ಧರಿಸಿತು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ರಾಜ್ಯೋತ್ಸವದ ಸಂದರ್ಭದಲ್ಲಿ ಕಾಸರಗೋಡು ಮತ್ತು ಕನ್ನಡ ಭಾಷೆಗೆ ಸಂಬಂಧಪಟ್ಟ ವ್ಯಕ್ತಿಗಳ, ಸಂಘ-ಸಂಸ್ಥೆಗಳ, ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಅಭಿಯಾನವು 1 ನವೆಂಬರ್ 2021ರಿಂದ 14 ಜನವರಿ 2022ರವರೆಗೆ ನಿರಂತರವಾಗಿ 75 ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವದೆಲ್ಲೆಡೆಯ ಜನರನ್ನು ತಲುಪುವ ಉದ್ದೇಶವಿದ್ದುದರಿಂದ ವಿಕಾಸ ಟ್ರಸ್ಟ್ ನ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನ ನಡೆಸಿದೆವು.

ಅಭಿಯಾನದ ದಿನಗಳಲ್ಲಿ ಕಾಸರಗೋಡು ಜಿಲ್ಲೆ, ಅಲ್ಲಿನ ಸಂಸ್ಕೃತಿ, ಭಾಷೆ ಕುರಿತು ಅರಿವಿರುವ, ಕಾಸರಗೋಡು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸುವ ನಮ್ಮ ಉದ್ದೇಶಕ್ಕೆ ಸಹಾಯ ಮಾಡಬಲ್ಲಂತಹ ಪ್ರಭಾವಿಗಳನ್ನು, ಗಣ್ಯರನ್ನು ಭೇಟಿಯಾಗಿ ಕಾಸರಗೋಡಿನ ಗತ ವೈಭವ, ಪ್ರಸ್ತುತ ಸ್ಥಿತಿ-ಗತಿ, ನಮ್ಮ ಕಾರ್ಯಯೋಜನೆ, ಅವರ ಸಹಭಾಗಿತ್ವ ಮುಂತಾದ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಿದ್ದೇವೆ. ಸುಮಾರು 35 ಜನ ಗಣ್ಯರನ್ನು ಭೇಟಿಯಾಗುವ ಉದ್ದೇಶವಿದ್ದರೂ ಕೋವಿಡ್ ಮುಂತಾದ ಸಮಸ್ಯೆಗಳಿಂದಾಗಿ 10 ಗಣ್ಯರನ್ನು ಭೇಟಿಯಾಗಲು ಅವಕಾಶವಾಯಿತು ಹಾಗೂ ಮುಂದಿನ ದಿನಗಳಲ್ಲಿ ಇನ್ನುಳಿದ ಗಣ್ಯರನ್ನು ಭೇಟಿಯಾಗುವ ಉದ್ದೇಶವಿದೆ.

ಕೇವಲ 5 ದಿನಗಳ ತಯಾರಿಯಿಂದ ಶುರುವಾದ ಅಭಿಯಾನವನ್ನು ನಿರಂತರವಾಗಿ ನಡೆಸಲು ತುಂಬಾ ಕಷ್ಟಪಟ್ಟಿದ್ದೇವೆ. ಅಭಿಯಾನದಲ್ಲಿ ನೀಡಿದ ವಿಷಯಗಳ ಕುರಿತು ಅರಿತವರಿಂದ ಸ್ಥೂಲ ಮಾಹಿತಿ ಸಂಗ್ರಹಿಸಿ, ಇನ್ನೂ ಹೆಚ್ಚಿನ ಮಾಹಿತಿಯನ್ನು ಇತರರಿಂದ ಸಂಗ್ರಹಿಸಿದೆವು. ನಂತರ ನಮ್ಮ ಪದಗಳ ಮಿತಿಯ ಒಳಗೆ ಸಂಕ್ಷಿಪ್ತಗೊಳಿಸಿ, ವಿನ್ಯಾಸ ಮಾಡಿದೆವು. ಸಮಗ್ರ ಮಾಹಿತಿ, ಕಾಸರಗೋಡು ಜಿಲ್ಲೆಯ ಯಾವ ಗ್ರಾಮ ಪಂಚಾಯತ್ ವ್ಯಾಪ್ತಿ, ಕಾಸರಗೋಡು ನಗರದಿಂದ ಇರುವ ಅಂತರ, ಒಂದೆರಡು ಛಾಯಾಚಿತ್ರ, ಸಂಪರ್ಕ ಸಂಖ್ಯೆ, ಗೂಗಲ್ ನಕ್ಷೆ, ವೆಬ್ ಸೈಟ್, ಸಾಮಾಜಿಕ ಜಾಲತಾಣ ಕೊಂಡಿಗಳು ಮುಂತಾದ ಅಂಶಗಳನ್ನು ಒಳಗೊಂಡ ಮಾಹಿತಿ ಪತ್ರಗಳು ಆ ವಿಷಯಗಳ ಕುರಿತು ಸಮಗ್ರ ಚಿತ್ರಣ ಕೊಡುವ ಒಂದು ಪುಟದ ಕರಪತ್ರದಂತೆ, ಎಲ್ಲರೂ ಜತನದಿಂದ ಕಾಪಿಟ್ಟುಕೊಳ್ಳುವ ದಾಖಲೆ ಎಂಬಂತೆ ಮೂಡಿಬಂತು.

ನಮ್ಮ ಮಾಹಿತಿ ಅಭಿಯಾನ ವೇಗ ಪಡೆದುಕೊಂಡಂತೆ, ಹಲವು ಗಣ್ಯರು ಹಾಗೂ ಜನಸಾಮಾನ್ಯರು ಈ 75 ವಿಷಯಗಳನ್ನು ಒಂದು ಪುಸ್ತಕ ರೂಪದಲ್ಲಿ ಹೊರತರಬೇಕು, ಪ್ರತಿಯೊಬ್ಬರ ಮನೆಯಲ್ಲೂ ಇದರ ಒಂದು ಪ್ರತಿ ಇರುವಂತಾಗಬೇಕು ಎಂಬ ಆಗ್ರಹಪೂರ್ವಕ ಸಲಹೆ ನೀಡಿದರು.

ನಾವು ಬಿಡುಗಡೆಗೊಳಿಸಿದ ಮಾಹಿತಿ ಪತ್ರಗಳು ಪರಿಪೂರ್ಣ ಎಂದು ನಾವು ಹಕ್ಕು ಸಾಧಿಸುವುದಿಲ್ಲ, ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ. 75 ಮಾಹಿತಿ ಪತ್ರಗಳನ್ನು ತಜ್ಞರಿಂದ ಇನ್ನೊಮ್ಮೆ ಪರಿಶೀಲನೆಗೊಳಪಡಿಸಿ, ಲೋಪವಾಗಿರುವ ಅಂಶಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಿತರಿಸಲು ನಿರ್ಧರಿಸಿದ್ದೇವೆ.

ಮಾಹಿತಿ ಪತ್ರಗಳು ಸೇರಿದಂತೆ ಅಭಿಯಾನಕ್ಕೆ ಸಂಬಂದಿಸಿದ ವಿನ್ಯಾಸಗಳನ್ನು ಅಂದವಾಗಿ ವಿನ್ಯಾಸ ಮಾಡಿದ, ಕಿರಿಯ ವಯಸ್ಸಿನಲ್ಲೇ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಂಸಿಸಲ್ಪಟ್ಟ ಪುತ್ತೂರಿನ ಶಿವಪ್ರಸಾದ್ ಕೆ. ಆಚಾರ್ ಅವರಿಗೆ ವಿಶೇಷ ಧನ್ಯವಾದಗಳು.

ಎಲ್ಲರ ಸಹಕಾರದಿಂದ ನಿರಂತರವಾಗಿ, ವಿವಾದಕ್ಕೀಡಾಗದೆ ಅತ್ಯಂತ ಯಶಸ್ವಿಯಾಗಿ ನಡೆದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ, ಎಲ್ಲರ ಅಭಿಮಾನವಾಗಿ ಮಾರ್ಪಟ್ಟಿದೆ ಎನ್ನುವ ತೃಪ್ತಿ ನಮ್ಮದು. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಅಧ್ಯಕ್ಷರು ಮತ್ತು ಸದಸ್ಯರು,
ವಿಕಾಸ ಟ್ರಸ್ಟ್ (ರಿ.)
16-01-2022