ವಿಕಾಸ ಟ್ರಸ್ಟ್ ವಾರ್ಷಿಕ ಮಹಾಸಭೆ, ರಕ್ತದಾನ ಶಿಬಿರ ಮತ್ತು ಹೆಲ್ಪ್ ಲೈನ್ ಲೋಕಾರ್ಪಣೆ

ಬೆಂಗಳೂರು, 27 ಜುಲೈ 2024:
ನಗರದಲ್ಲಿ ನೆಲೆಸಿರುವ ಕಾಸರಗೋಡು ಜಿಲ್ಲೆಯ ಜನರ ಸಂಘಟನೆ ವಿಕಾಸ ಟ್ರಸ್ಟ್ ವಾರ್ಷಿಕ ಮಹಾಸಭೆಯು ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಇಂದು ನಡೆಯಿತು. ಮಹಾಸಭೆಯನ್ನು ಟ್ರಸ್ಟಿನ ಹಿರಿಯ ಸದಸ್ಯರಾದ ಗಣೇಶ್ ಕಂಬಾರು ಅವರು ಉದ್ಘಾಟಿಸಿ, ಕಾಸರಗೋಡು ಮೂಲದ ಜನರನ್ನು ಸಂಘಟಿಸಬೇಕಾದ ಅಗತ್ಯ ಮತ್ತು ಸದಸ್ಯರು ಪರಸ್ಪರರಿಗೆ ಸಹಕರಿಸುವುದು ಮಾತ್ರವಲ್ಲದೇ ಅಚ್ಚ ಕನ್ನಡ ನೆಲವಾದ ಕಾಸರಗೋಡಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಟ್ರಸ್ಟಿನ ಇದುವರೆಗಿನ ಕಾರ್ಯಚಟುವಟಿಕೆಗಳು ಹಾಗೂ ಮುಂದೆ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯ ಯೋಜನೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಟ್ರಸ್ಟಿನ ಸದಸ್ಯ ಚರಣ್ ಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿದರು ಮತ್ತು ಟ್ರಸ್ಟಿಗಳಲ್ಲೊಬ್ಬರಾದ ಡಾ. ವಿಠಲ್ ಪ್ರಸಾದ್ ಅವರು ವಂದಿಸಿದರು.

ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ವತಿಯಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಖ್ಯಾತ ನಟಿ ರೂಪಿಕಾ ಅವರು ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿ, ವಿಕಾಸ ಟ್ರಸ್ಟ್ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಪ್ರಮುಖರು ಗಣ್ಯರಿಗೆ ಮತ್ತು ವಿಕಾಸ ಟ್ರಸ್ಟ್ ಸದಸ್ಯರಿಗೆ ರಕ್ತ ಕೇಂದ್ರದ ಎಲ್ಲಾ ವಿಭಾಗಗಳ ಪರಿಚಯ ಮಾಡಿ, ರಕ್ತ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಮತ್ತು ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಕಾಸರಗೋಡು ಮೂಲದ ಜನರಿಗೆ ಸಹಾಯ ಮಾಡುವ ಮತ್ತು ಕಾಸರಗೋಡಿನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆರಂಭಿಸಲಾದ ಸಹಾಯವಾಣಿ ನಂಬರ್ 97 43 11 77 33 ನ್ನು ಅತಿಥಿಗಳಾದ ನಟಿ ರೂಪಿಕಾ ಅವರು ಲೋಕಾರ್ಪಣೆಗೊಳಿಸಿದರು.

ರಾಷ್ಟ್ರೋತ್ಥಾನ ರಕ್ತಕೇಂದ್ರದ ಯೋಜನೆಯಾದ ಸಂರಕ್ಷ – ತಲಸ್ಸೆಮಿಯಾ ಡೇ ಕೇರ್ ಸೆಂಟರ್ ಯೋಜನೆಯ ಫಲಾನುಭವಿ ರೋಗಿಗಳಿಗೆ ಟ್ರಸ್ಟ್ ವತಿಯಿಂದ ಹಣ್ಣುಹಂಪಲು ವಿತರಿಸಲಾಯಿತು.

ಮಹಾಸಭೆಯ ನಂತರ ನಡೆದ ಭೋಜನ ವ್ಯವಸ್ಥೆಗೆ ಬೇಕಾದ ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನು ಬೆಂಗಳೂರಿನ ಖ್ಯಾತ ಸ್ವಯಂಸೇವಾ ಸಂಸ್ಥೆಯಾದ ಅದಮ್ಯ ಚೇತನ ನಡೆಸುತ್ತಿರುವ ಉಚಿತ ಪ್ಲೇಟ್ ಬ್ಯಾಂಕ್ ನಿಂದ ತರುವ ಮೂಲಕ ಯಾವುದೇ ಪ್ರಾಸ್ಟಿಕ್ ಉತ್ಪನ್ನ ಬಳಸದಿರುವ ಮೂಲಕ ವಿಕಾಸ ಟ್ರಸ್ಟ್ ಪರಿಸರ ಸಂರಕ್ಷಣೆಗೆ ತನ್ನ ಅಳಿಲು ಸೇವೆ ಸಲ್ಲಿಸಿದ್ದು ಅತಿಥಿಗಳ ಗಮನ ಸೆಳೆಯಿತು.

 

Loading