ಬೆಂಗಳೂರು, 6 ಜನವರಿ 2022
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 67ನೇ ದಿನದ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನ, ಅನಂತಪುರ ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು.
ಕಳೆದ 67 ದಿನಗಳ ಅಭಿಯಾನದ ಮಾಹಿತಿ ಪತ್ರಗಳನ್ನು ಪರಿಶೀಲಿಸಿದ ಸಚಿವರು ಗಡಿ ಜಿಲ್ಲೆಯಾದ ಕಾಸರಗೋಡಿನ ಪ್ರಸಿದ್ಧ ವ್ಯಕ್ತಿಗಳು, ಪ್ರೇಕ್ಷಣೀಯ ಸ್ಥಳಗಳು ವಿಶೇಷವಾಗಿ ಹಲವು ದೇವಾಲಯಗಳ ಕುರಿತು ತಿಳಿದುಕೊಂಡರು. ತಾನು ಬಿಡುಗಡೆಗೊಳಿಸಿದ ಸರೋವರ ಕ್ಷೇತ್ರ ಅನಂತಪುರದ ಸರೋವರ, ಮೊಸಳೆ, ವಿಗ್ರಹ ರಚನೆಯ ವಿಧಾನ, ವಿಲ್ವಮಂಗಲ ಗುಹೆ ಮತ್ತು ತಿರುವನಂತಪುರ ದೇವಸ್ಥಾನಕ್ಕಿರುವ ಸಂಬಂಧ ಕುರಿತು ಮಾಹಿತಿ ಪಡೆದರು ಹಾಗೂ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಪ್ರವಾಸ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಇಚ್ಛೆ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಯುವಕರು ವಿಕಾಸ ಟ್ರಸ್ಟ್ ಮೂಲಕ ಸಂಘಟಿತರಾಗಿ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ನಿಯೋಗದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಗಣೇಶ್ ರೈ, ಸುಖೇಶ್ ರೈ ಉಪಸ್ಥಿತರಿದ್ದರು.