ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 74ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಚಿವ ಹಾಲಪ್ಪ ಆಚಾರ್

ಬೆಂಗಳೂರು, 13 ಜನವರಿ 2022
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 74ನೇ ದಿನದ ಆಶ್ರಯ ಆಶ್ರಮ, ಕನ್ಯಪ್ಪಾಡಿ ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಅವರು ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು.

ಕಳೆದ 74 ದಿನಗಳ ಅಭಿಯಾನದ ಮಾಹಿತಿ ಪತ್ರಗಳನ್ನು ಪರಿಶೀಲಿಸಿದ ಸಚಿವರು ಗಡಿ ಜಿಲ್ಲೆಯಾದ ಕಾಸರಗೋಡಿನ ಪ್ರಸಿದ್ಧ ವ್ಯಕ್ತಿಗಳು, ಪ್ರೇಕ್ಷಣೀಯ ಸ್ಥಳಗಳು, ಸಂಘ-ಸಂಸ್ಥೆಗಳ ಕುರಿತು ತಿಳಿದುಕೊಂಡರು. ಇಷ್ಟು ದೀರ್ಘ ಅವಧಿಯ ಅಭಿಯಾನ ಮುಂದಿನ ತಲೆಮಾರಿಗೆ ಉತ್ತಮ ದಾಖಲೀಕರಣವಾಗಿದೆ ಎಂದು ಪ್ರಶಂಸಿಸಿದರು. ತಾನು ಬಿಡುಗಡೆಗೊಳಿಸಿದ ಆಶ್ರಯ ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರು ಹಾಗೂ ಮಾಹಿತಿ ಪತ್ರವನ್ನು ಸಂಪೂರ್ಣವಾಗಿ ಓದಿದರು. ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಯುವಕರು ವಿಕಾಸ ಟ್ರಸ್ಟ್ ಮೂಲಕ ಸಂಘಟಿತರಾಗಿ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ನಡೆಸುತ್ತಿರುವ ಆಶ್ರಯ ಆಶ್ರಮ, ಕನ್ಯಪ್ಪಾಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ಥರಾದ ಸುರೇಶ್ ಜೆ.ಆರ್., ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಗಣೇಶ್ ರೈ ಉಪಸ್ಥಿತರಿದ್ದರು.

Loading