ಕೋವಿಡ್-19 ಪರೀಕ್ಷೆ ಕಡ್ಡಾಯದಿಂದ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ಜನತೆಗೆ ವಿನಾಯಿತಿ ನೀಡುವಂತೆ ಕರ್ನಾಟಕ ಸಿಎಂಗೆ ಮನವಿ

ಬೆಂಗಳೂರು, 22 ಫೆಬ್ರವರಿ 2021
ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ ಪ್ರವೇಶಿಸಲು ಇರುವ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯದಿಂದ ವಿನಾಯಿತಿ ನೀಡುವ ಬಗ್ಗೆ ಮನವಿ ಸಲ್ಲಿಸಿದರು.

ಈ ಕುರಿತ ಮನವಿ ಪತ್ರವನ್ನು ತನ್ನ ಕಾರ್ಯದರ್ಶಿಗಳಿಗೆ ನೀಡಿದ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆ ನೀಡಿದರು.

ನಂತರ ನಿಯೋಗವು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರನ್ನು ಭೇಟಿಯಾಗಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ಜನರಿಗಾಗುವ ತೊಂದರೆಯನ್ನು ವಿವರಿಸಿ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

1. ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರು ಹೆಚ್ಚಾಗಿ ದಕ್ಷಿಣ ಕನ್ನಡವನ್ನು ಆಶ್ರಯಿಸಿರುವುದರಿಂದ ಮತ್ತು ಈ ಪ್ರದೇಶದಲ್ಲಿ ಕೋವಿಡ್ ಕನಿಷ್ಠ ಪ್ರಮಾಣದಲ್ಲಿರುವುದರಿಂದ ಈ ತಾಲೂಕುಗಳ ಜನರಿಗೆ ಕೋವಿಡ್-19 ಪರೀಕ್ಷೆಯಿಂದ ವಿನಾಯಿತಿ ನೀಡಬೇಕು. ಈ ಜನರ ವಾಸಸ್ಥಳ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ವಿಳಾಸವನ್ನು ಪರಿಗಣಿಸಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಮೊಬೈಲ್ ನಂಬರ್ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.

2. ಈಗಾಗಲೇ ಸಂಚಾರಕ್ಕೆ ಅನುಮತಿಸಿದ 4 ರಸ್ತೆಗಳಲ್ಲದೆ, ಮಂಜೇಶ್ವರ – ಪುತ್ತೂರು ರಸ್ತೆಯ ಆನೆಕಲ್ಲು, ಬಂದಡ್ಕ-ಸುಳ್ಯ ರಸ್ತೆಯ ಮಾಣಿಮೂಲೆ, ಉಪ್ಪಳ-ಪುತ್ತೂರು ರಸ್ತೆಯ ನೆಲ್ಲಿಕಟ್ಟೆ-ಮುಗುಳಿ ಹಾಗೂ ಪೆರ್ಲ-ಪಾಣಾಜೆ ರಸ್ತೆಯ ಸ್ವರ್ಗ ಚೆಕ್ ಪೋಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು.

3. ಇತರೆ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಇವುಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಮತವಿದೆ.

ನಿಯೋಗದಲ್ಲಿ ವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಕಾರ್ಯದರ್ಶಿ ನಿತಿನರಾಜ್ ನಾಯ್ಕ್, ಬಾ.ನಾ.ಸುಬ್ರಹ್ಮಣ್ಯ, ಗಿರೀಶ್, ಮಂಜು ಪ್ರಸಾದ್ ಮುಂತಾದವರಿದ್ದರು.

Loading

Leave a Reply

Your email address will not be published. Required fields are marked *