ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ ಮಾಹಿತಿ ಪತ್ರಗಳ ಪ್ರದರ್ಶನ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, 10 ಫೆಬ್ರವರಿ 2022:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಗಾಂಧಿ ಭವನದಲ್ಲಿ ನಡೆಯಿತು. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಗಡಿನಾಡ ಸಂತ ಶ್ರೀ ಬಿ. ಪುರುಷೋತ್ತಮ ಮಾಸ್ತರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ (ರಿ.) ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನಮಾಹಿತಿ ಪತ್ರಗಳ ಪ್ರದರ್ಶನವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯೋಗ ಮತ್ತು ವಿದ್ಯಾಭ್ಯಾಸ ಸೇರಿದಂತೆ ದಿನನಿತ್ಯದ ಚಟುವಟಿಕೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿತರಾಗಿರುವ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನತೆ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಯಾತನೆಗಳನ್ನು ಕಾಸರಗೋಡು ಜಿಲ್ಲೆಯ ನಕ್ಷೆ ಮೂಲಕ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಮಾಹಿತಿ ಪತ್ರಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಎಡನೀರು ಮಠಾಧೀಶರಾಗಿದ್ದ ಕೇಶವಾನಂದ ಭಾರತಿ ಶ್ರೀಗಳ ಜತೆಗಿನ ಒಡನಾಟವನ್ನು ಹಾಗೂ 2021ರಲ್ಲಿ ಕೇರಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಪ್ರವಾಸ ಮಾಡಿದ್ದನ್ನು ಸ್ಮರಿಸಿಕೊಂಡರು. ಬಜೆಟ್ ಅಧಿವೇಶನದ ನಂತರ ಕಾಸರಗೋಡು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲು ವಿಕಾಸ ಟ್ರಸ್ಟ್ ನಿಯೋಗದ ಜತೆ ಸಭೆ ನಡೆಸುವ ಭರವಸೆ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಪ್ರೊ. ಕೆ.ಇ. ರಾಧಾಕೃಷ್ಣ, ಪ್ರದೀಪ್ ಕುಮಾರ್ ಕಲ್ಕೂರ, ಬಾ.ನಾ. ಸುಬ್ರಹ್ಮಣ್ಯ, ಡಾ. ರತ್ನಾಕರ ಮಲ್ಲಮೂಲೆ ಮುಂತಾದ ಹಲವು ಗಣ್ಯರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ಕಯ್ಯಾರ ಕಿಂಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಕಾಸರಗೋಡಿನ ಹಿರಿಯರಾದ ಗಡಿನಾಡ ಸಂತ ಶ್ರೀ ಬಿ. ಪುರುಷೋತ್ತಮ ಮಾಸ್ತರ್ ಅವರನ್ನು ವಿಕಾಸ ಟ್ರಸ್ಟ್ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಟ್ರಸ್ಟಿಗಳಾದ ಡಾ. ವಿಠಲ್ ಪ್ರಸಾದ್, ನಿತಿನ್ ರಾಜ್ ನಾಯ್ಕ್, ಸದಸ್ಯರಾದ ನವೀನ್ ಎಲ್ಲಂಗಳ, ಸೂರ್ಯ ಬೋರ್ಕರ್, ಅಜಿತ್ ನಾಯಕ್, ಮಹೇಶ್ ಕುಮಾರ್, ಸುಖೇಶ್ ರೈ, ನವ್ಯಾ ಮುಂತಾದವರು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *

ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಅಚ್ಚ ಕನ್ನಡ ಪ್ರದೇಶವಾದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿರುವ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿರುವ ಕನ್ನಡ...

Next Projects

ವಿಕಾಸ ಟ್ರಸ್ಟ್ ಮುಂದಿನ ಯೋಜನೆಗಳು

Donate

Your donation will help us accomplish our mission...