ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 60ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಪೇಜಾವರ ಶ್ರೀಗಳು

ಬೆಂಗಳೂರು, 30 ಡಿಸೆಂಬರ್ 2021
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 60ನೇ ದಿನದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಕುರಿತಾದ ಮಾಹಿತಿ ಪತ್ರವನ್ನು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಬೆಂಗಳೂರಿನ ವಿದ್ಯಾಪೀಠದಲ್ಲಿ ಬಿಡುಗಡೆಗೊಳಿಸಿದರು.

ಮಾಹಿತಿ ಅಭಿಯಾನದ ಅಂಗವಾಗಿ ಇದುವರೆಗೆ ಬಿಡುಗಡೆಗೊಳಿಸಿದ 60 ಮಾಹಿತಿ ಪತ್ರಗಳನ್ನು ಕೂಲಂಕುಷವಾಗಿ ವೀಕ್ಷಿಸಿ, ಪ್ರತಿಯೊಂದು ವಿಷಯದ ಕುರಿತು ನಿಯೋಗದ ವಿವರಣೆಯನ್ನು ಶ್ರೀಗಳು ಆಲಿಸಿದರು. ಕಾಸರಗೋಡು ಜಿಲ್ಲೆಯ ಜತೆ ತಮ್ಮ ಮಠದ ಸಂಬಂಧ, ಜಿಲ್ಲೆಗೆ ಹಲವು ಕಾರ್ಯಕ್ರಮಗಳಿಗೆ ಆಗಮಿಸಿದ ನೆನಪುಗಳನ್ನು ಸ್ಮರಿಸಿಕೊಂಡ ಶ್ರೀಗಳು ವಿಕಾಸ ಟ್ರಸ್ಟ್ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಗಳ ಕುರಿತು ತಿಳಿದು ಮೆಚ್ಚುಗೆ ಸೂಚಿಸಿದರು. ಕಾಸರಗೋಡು ಜಿಲ್ಲೆಯ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಜ್ಞಾಪಿಸಿ, ನಿಯೋಗಕ್ಕೆ ತಮ್ಮ ಆಶೀರ್ವಾದ, ಮಾರ್ಗದರ್ಶನ ಮಾಡಿದರು.

ಇದುವರೆಗೆ ಬಿಡುಗಡೆಗೊಳಿಸಿದ ಎಲ್ಲಾ ಮಾಹಿತಿ ಪತ್ರಗಳನ್ನು ಪರಿಶೀಲಿಸುತ್ತಿರುವ ಪೇಜಾವರ ಶ್ರೀಗಳು

ನಿಯೋಗದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಪದ್ಮನಾಭ ಹೊಳ್ಳ, ರಾಮಮೂರ್ತಿ, ಗಣೇಶ್ ರೈ, ಸುಖೇಶ್ ರೈ ಉಪಸ್ಥಿತರಿದ್ದರು.