ಕಾರ್ಗಿಲ್ ವಿಜಯ್ ದಿವಸ್: ಯುದ್ಧದ ದಿನಗಳನ್ನು ನೆನಪಿಸಿಕೊಂಡ ಕಾಸರಗೋಡಿನ ಇಬ್ಬರು ವೀರ ಯೋಧರು

ಕಾಸರಗೋಡು, 26 ಜುಲೈ 2021
ಸೈನಿಕನಾಗುವುದೆಂದರೆ ಅದು ಪೂರ್ಣ ಸಮರ್ಪಣೆಯ ಕಾರ್ಯ. ಅಲ್ಲಿ ಭಯ ಹಿಂಜರಿಕೆಯೆಂಬುವುದು ಇಲ್ಲ. ನೀರಿನಲ್ಲಿ ಮುಳುಗುವ ಮೊದಲು ನಾವು ಚಳಿಯಾಗುತ್ತದೆಂದು ಭಾವಿಸುತ್ತೇವೆ ಆದರೆ ಒಮ್ಮೆ ನೀರಿನಲ್ಲಿ ಸಂಪೂರ್ಣ ಮುಳುಗಿದ ಬಳಿಕ ಚಳಿಯ ಕುರಿತಾದ ಹಿಂಜರಿಕೆ ಇಲ್ಲದಾಗಿ ಬಿಡುತ್ತದೆ. ಅದರಂತೆಯೆ ಸೈನಿಕನಾಗಿ ತರಬೇತಿ ಪಡೆದು ಸೈನಿಕ ಸಮವಸ್ತ್ರವನ್ನು ಧರಿಸಿದ ಬಳಿಕ ಯಾವುದೇ ಭಯ ಇರುವುದಿಲ್ಲ ಎಂದು ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. ಅವರು ಅಭಿಪ್ರಾಯಪಟ್ಟರು. ನಮ್ಮ ಕಾಸರಗೋಡು ಕ್ಲಬ್ ಮತ್ತು ವಿಕಾಸ ಟ್ರಸ್ಟ್ (ರಿ.) ಜಂಟಿಯಾಗಿ ಕ್ಲಬ್‌ಹೌಸ್ ನಲ್ಲಿ ಆಯೋಜಿಸಿದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧ ದಿನಗಳ ಅನುಭವ ಎಂದಿಗೂ ಮರೆಯಲು ಸಾದ್ಯವಿಲ್ಲ. ವೀರ ಮೃತ್ಯು ಹೊಂದಿದ ಧೀರ ಜವಾನರ ಪಾರ್ಥಿವ ಶರೀರವನ್ನು ಅವರವರ ಕುಟುಂಬಗಳಿಗೆ ತಲುಪಿಸುವ ಕಾರ್ಯ, ಜತೆಗೆ ಕುಟುಂಬದವರ ವೇದನೆಯ ದೃಶ್ಯ ಮನಕಲಕುತ್ತಿತ್ತು ಎಂದವರು ನುಡಿದರು. ಯುದ್ಧದ ಸಂದರ್ಭದಲ್ಲಿ ಮಡಿದಿದ್ದ ಕ್ಯಾಪ್ಟನ್ ಅನಿಫುದಿನ್ ಅವರ ಪಾರ್ಥಿವ ಶರೀರ ದೊರಕದೇ ಹೋದ ಸಂದರ್ಭದಲ್ಲಿ, ಧೀರ ಜವಾನ ಅನಿಫುದಿನ್ ಅವರ ತಾಯಿ “ನನ್ನ ಮಗನ ಶರೀರ ಹುಡುಕಲು ಮತ್ತೊಬ್ಬ ಸೈನಿಕನ ಜೀವವನ್ನು ಪಣವಾಗಿಡಬೇಡಿ” ಎಂದು ಹೇಳಿದ ಮಾತುಗಳನ್ನು ಅವರು ನೆನಪಿಸಿಕೊಂಡರು. ಆ ವೀರಮಾತೆಯ ಸಮರ್ಪಣೆಯ ಮಾತುಗಳು ಎಲ್ಲರಿಗೂ ಪ್ರೇರಣೆ ಎಂದು ಅವರು ಹೇಳಿದರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಅವರ ವೀಶೇಷ ಅಧಿಕಾರಿಗಳಾಗಿ ಸೇವೆ ಮಾಡಲು ದೊರಕಿದ ಅನುಭವಗಳನ್ನು ಅವರು ಹಂಚಿಕೊಂಡರು. ‌‌‌‌‌‌‌‌‌ಕಲಾಂ ಅವರಲ್ಲಿದ್ದ ಮಾನವೀಯತೆ, ದೇಶಪ್ರೇಮ ಕಾಳಜಿ ಕುರಿತು ಮಾತನಾಡುತ್ತಾ ಡಾ. ಕಲಾಂ ಅವರು ಎಲ್ಲರಿಗೂ ಮಾದರಿ ಎಂದರು.

ಕಮಾಂಡೋ ಶ್ಯಾಮರಾಜ್ ವೀರಕಥೆ
ಪ್ಯಾರಚೂಟ್ ಬಿಡಿಸಿಕೊಳ್ಳಲಾಗದೆ ಗೆಳೆಯ ಕಣ್ಣಮುಂದೆಯೆ ನೆಲಕ್ಕೆ ಬಿದ್ದ ಸನ್ನಿವೇಶವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಅನೇಕ ಸಂದರ್ಭಗಳನ್ನು ಸೈನಿಕ ಜೀವನದಲ್ಲಿ ಎದುರಿಸಲೇಬೇಕು, ಅವೆಲ್ಲವನ್ನೂ ಮೆಟ್ಟಿ ನಿಂತು ದೇಶಕ್ಕಾಗಿ ದುಡಿಯಬೇಕು ಎಂದು ಕಮಾಂಡೋ ಶ್ಯಾಮರಾಜ್ ಇ.ವಿ. ಅವರು ನುಡಿದರು.

ಸೈನಿಕ ಶಿಬಿರದ ಸ್ಥಳಾಂತರದ ಸಂದರ್ಭದಲ್ಲಿ ಉಂಟಾದ ಅಪಘಾತದಿಂದ ಮೂರೂವರೆ ವರುಷ ಆಸ್ಪತ್ರೆಯಲ್ಲಿ ಅನುಭವಿಸಿದ ನರಕಯಾತನೆಯನ್ನು ನೆನಪಿಸಿಕೊಂಡ ಅವರು, ಒಮ್ಮೆ ಕೇರಳದಿಂದ ಪುಣೆಗೆ ರೈಲು ಮುಖೇನ ಸಂಚರಿಸುತ್ತಿದ್ದ ಸಂದರ್ಭದಲ್ಲಿ ವಿಕಲಚೇತನರಾದ ತಮಗೆ ಯಾರೂ ಸೀಟನ್ನು ಕೊಡದೇ ಇದ್ದ ಕಹಿಘಟನೆಯನ್ನೂ ನೆನಪಿಸಿಕೊಂಡರು.

ಎಡನೀರು ಮಠದ ಪರಿಸರದಲ್ಲಿನ ತನ್ನ ಬಾಲ್ಯಕಾಲವನ್ನು, ಅಲ್ಲಿಂದ ಮಿಲಿಟರಿ ಸೇವೆಗೆ ಸೇರಿದ ಹಾದಿಯನ್ನು, ಆ ತರಬೇತಿಯಲ್ಲಿ ಅನುಭವಿಸಿದ ಕಠಿಣ ಪರಿಸ್ಥಿತಿಯನ್ನು ಅವರು ಮೆಲುಕು ಹಾಕಿದರು.

ಧಾರ್ಮಿಕ ಮುಂದಾಳುಗಳಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಮಾತನಾಡಿ‌ ಸೈನಿಕರ ಜೀವನ ದೇಶಕ್ಕೆ ಸಮರ್ಪಿತವಾಗಿರುವ ಮತ್ತು ಆ ಸಮರ್ಪಣೆಯಿಂದಲೇ ದೇಶ ಭದ್ರವಾಗಿರುವ ಕುರಿತು ಹೇಳಿದರು. ಅಂತಹ ಶ್ರೇಷ್ಟ ವ್ಯಕ್ತಿತ್ವಗಳು ಸೈನಿಕರು, ಅವರ ಪಾದಕ್ಕೆ ಎರಗಿ ನಾವು ನಮಸ್ಕರಿಸಬೇಕು ಎಂದು ಅವರು ಹೇಳಿದರು.

ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ಮಾತನಾಡಿ ವೀರ ಸೈನಿಕರಿಗೆ ನುಡಿನಮನ ಸಲ್ಲಿಸಿದರು. ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿಯ ಶ್ರೀ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ಮಾತನಾಡುತ್ತಾ ಸೈನಿಕರೆಂದರೆ ತ್ಯಾಗಿಗಳು, ಇತರ ಯಾವುದೇ ಸ್ಥಾನದಲ್ಲಿರುವವರಾದರೂ ಅಲ್ಲಿ ಅಧಿಕಾರದ ಸುಖ‌ ಇರುತ್ತದೆ. ಆದರೆ ಸೈನಿಕರಿಗೆ ಆ ಸುಖ ಇಲ್ಲ. ಅವರು ಜೀವವನ್ನೇ ಪಣವಾಗಿಟ್ಟು ಹೋರಾಡುತ್ತಾರೆ ಎಂದು ಹೇಳಿದರು.

ಕಾಸಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ ಸೈನಿಕರೆಂದರೆ ದೇವರಂತೆ, ಸಮಾಜದ ವಿವಿಧ ಸ್ತರದ ಉದ್ಯೋಗಿಗಳು ಅತ್ಯಂತ ಬೇಗ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ದೇಶಕ್ಕಾಗಿ ಜೀವವನ್ನೇ ಪಣವಾಗಿಡುವ ಸೈನಿಕರು ಗುರುತಿಸಲ್ಪಡುವುದು ಕಡಿಮೆ. ಸಮಾಜದಿಂದ ಸೈನಿಕರಿಗೆ ವಿಶೇಷ ಗೌರವ ದೊರಕಬೇಕು ಎಂದು ಹೇಳಿದರು. ಸೈನಿಕರ ತ್ಯಾಗದ ಸಮರ್ಪಣೆಯ ನೈಜ ದರ್ಶನ ಯುವತಲೆಮಾರಿಗೆ ಆಗಬೇಕು, ಅದಕ್ಕಾಗಿ ಸೈನಿಕರ ಜೀವನ ಯಾತ್ರೆಯನ್ನು ದಾಖಲಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಜೆ.ಎಸ್., ಮಧೂರು ಪಂಚಾಯತ್ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಜಿ., ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವೀನ ಮೊಂತೇರೊ, ಪುತ್ತಿಗೆ ಪಂಚಾಯತು ಅಧ್ಯಕ್ಷರಾದ ಶ್ರೀ ಸುಬ್ಬಣ್ಣ ಆಳ್ವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕ್ಯಾಂಪ್ಕೊ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಖಂಡಿಗೆ, ಭಟ್‌ ಏಂಡ್‌ ಭಟ್ ಖ್ಯಾತಿಯ ಶ್ರೀ ಸುದರ್ಶನ್ ಭಟ್ ಬೆದ್ರಡಿ, ಯುವ ನಿರ್ದೇಶಕ ಶ್ರೀ ಕಿರಣ್ ರಾಜ್ ಕೆ. ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಸೇರಿದಂತೆ ಒಟ್ಟು 395 ಜನ ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಕಾಸ್ ಟ್ರಸ್ಟ್ ಸ್ಥಾಪಕರಾದ ಶ್ರೀ ರವಿನಾರಾಯಣ ಗುಣಾಜೆ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತ ಕೋರಿದರು. ನಮ್ಮ ಕಾಸರಗೋಡು ಕ್ಲಬ್ ನ ಶ್ರೀ ಸುಮಿತ್ ರಾಜ್ ಅವರು ಧನ್ಯವಾದ ಸಮರ್ಪಿಸಿದರು. ಶ್ರೀ ದೀಕ್ಷಿತ್ ಶೆಟ್ಟಿ ಬಜಕೂಡ್ಲು ಅವರ ಸೊಗಸಾದ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮ, ಗಾಯಕರಾದ ಶ್ರೀ ಕಿಶೋರ್ ಪೆರ್ಲ ಅವರ “ಎದ್ದು ನಿಲ್ಲು ವೀರ ದೇಶ ಕರೆದಿದೆ” ಎಂಬ ದೇಶಭಕ್ತಿಯ ಹಾಡಿನೊಂದಿಗೆ ಆರಂಭಗೊಂಡು ಸರಿಗಮಪ ಖ್ಯಾತಿಯ ಹಾಡುಗಾರ್ತಿ ಕು. ಪೃಥ್ವಿ ಭಟ್ ಅವರ ವಂದೇ ಮಾತರಂ ಹಾಡಿನೊಂದಿಗೆ ಕೊನೆಗೊಂಡಿತು.

Loading