ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 34ನೇ ದಿನದ ಮಾಹಿತಿ ಪತ್ರ ಮತ್ತು ಕನ್ನಡ ಭಾಷೆಯ ಕಾಸರಗೋಡು ಜಿಲ್ಲಾ ನಕ್ಷೆ ಬಿಡುಗಡೆಗೊಳಿಸಿದ ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು, 4 ಡಿಸೆಂಬರ್ 2021
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 34ನೇ ದಿನದ ಕಾಸರಗೋಡಿನ ಮೇರು ಸಾಹಿತಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಕುರಿತಾದ ಮಾಹಿತಿ ಪತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಬೆಂಗಳೂರಿನ ಚಾಮರಾಜೇಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಸಿದ್ಧಪಡಿಸಿದ ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳ, ಬ್ಲಾಕ್ (ತಾಲ್ಲೂಕು) ಪಂಚಾಯತುಗಳ, ವಿಧಾನಸಭಾ ಕ್ಷೇತ್ರಗಳ ಹೆಸರು ಕನ್ನಡ ಭಾಷೆಯಲ್ಲಿ ದಾಖಲಿಸಿರುವ ಕಾಸರಗೋಡು ಜಿಲ್ಲಾ ನಕ್ಷೆಯನ್ನು ಅನಾವರಣಗೊಳಿಸಿದರು.

ವಿಕಾಸ ಟ್ರಸ್ಟ್ ನಿಯೋಗ ಕಾಸರಗೋಡು ಮತ್ತು ಕರ್ನಾಟಕದ ಬಾಂಧವ್ಯ, ಕೋವಿಡ್ ಮಹಾಮಾರಿ ನಂತರದ ಗಡಿ ಸಮಸ್ಯೆ, ಇದರಿಂದಾಗಿ ಕನ್ನಡಿಗರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಮಹೇಶ್ ಜೋಶಿ ಅವರ ಗಮನ ಸೆಳೆಯಿತು. ಮಾಹಿತಿ ಅಭಿಯಾನದ ಅಂಗವಾಗಿ ಇದುವರೆಗೆ ಬಿಡುಗಡೆಗೊಳಿಸಿದ 34 ಮಾಹಿತಿ ಪತ್ರಗಳನ್ನು ವೀಕ್ಷಿಸಿದ ಮಹೇಶ್ ಜೋಶಿ ಅವರು ಕಾಸರಗೋಡು ಮತ್ತು ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡಿದರು. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನೆಂಬ ನೆಲೆಯಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಮತ್ತು ಸಹಾಯದ ಕುರಿತು ವಾಗ್ದಾನಗೈದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ ಎಸ್.ವಿ.ಭಟ್, ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಸುಖೇಶ್ ರೈ, ವಿಖ್ಯಾತ ಎನ್.ವಿ. ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಜತೆ ವಿಕಾಸ ಟ್ರಸ್ಟ್ ನಿಯೋಗ

ಕಾಸರಗೋಡು ಜಿಲ್ಲಾ ನಕ್ಷೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. Kasaragod District Map in Kannada